ಚಂದ್ರಸಾಗರ ವರ್ಣಿ(ಬ್ರಹ್ಮಣಾಂಕ):-

ಸು. 1810. ಜೈನಕವಿ. ಈತ ಕದಂಬಪುರಾಣ. ಚಂದನೆಯ ಕಥೆ, ಜಿನಭಕ್ತಿಸಾರ, ಜಿನಮುನಿ, ಪರಶುರಾಮ ಭಾರತ, ಪುರಾಣ ಸ್ತೋತ್ರ, ಬೆಟ್ಟವರ್ಧನ ಚರಿತ್ರೆ, ಬ್ರಹ್ಮಶತಕೋಶ, ಭವ್ಯಾಮೃತ, ಮುಲ್ಲಾಶಾಸ್ತ್ರ, ಜಿನರಾಮಾಯಣ, ರುದ್ರಯಕ್ಷಗಾನ, ವಾಸುದೇವ ಪಾರಿಜಾತ, ಶಬ್ದಾರ್ಥಮಂಜರಿ, ಸ್ಮರ ಕೊರವಂಜಿ, ಹಿಮಶೀತಳನ ಕಥೆ-ಈ ಗ್ರಂಥಗಳನ್ನು ಬರೆದಿದ್ದಾನೆ. ಈತ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಗೆ ಸೇರಿದ ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಗ್ರಾಮದವ. ಪಿತಾಮಹ ಚಂದ್ರನಾಥ; ತಂದೆ ಚಂದಣ್ಣ; ತಾಯಿ ಪೊಂಬೂಜಿಯಮ್ಮ. ಈತನಿಗೆ ಚಂದ್ರನಾಥ, ಗುಟ್ಟಬ್ರಹ್ಮ, ಪದ್ಮಮಣ್ಣ ಎಂಬ ಮೂವರೂ ಸಹೋದರರು ಇದ್ದಂತೆ ತಿಳಿದು ಬರುತ್ತದೆ. ಈತನ ಪೂರ್ವಿಕರು ಹುಬ್ಬಳ್ಳಿ-ಬಳ್ಳಾರಿ ಮಾರ್ಗದಲ್ಲಿ ತುಂಗಭದ್ರಾನದಿಯ ನೆರೆಯಲ್ಲಿರುವ ಹುಲಿಗೆಯ ಹೆಗ್ಗಡೆಗಳಾಗಿದ್ದರು. ಅನಂತರ ತೋವಿನಕೆರೆಗೆ ಬಂದು ನೆಲಸಿದರು.

ಈತನ ಪೂರ್ವಾಶ್ರಮದ ಹೆಸರು ಬ್ರಹ್ಮ, ಬ್ರಹ್ಮಣಾಂಕ ಎಂದಿತ್ತು. ಜೈನದೀಕ್ಷೆ ಪಡೆದ ಮೇಲೆ ಈತ ಚಂದ್ರಸಾಗರವರ್ಣಿಯಾದ. ಈತನ ಗುರು ಲಕ್ಷ್ಮೀಸೇನ. ಈತ ಸೇನ ಪಂಗಡಕ್ಕೆ ಸೇರಿದವ. ಜಿನಮುನಿ ಎಂಬ ಗ್ರಂಥದಲ್ಲಿ ಈತ ಗೃಹಸ್ಥಾಶ್ರಮದಲ್ಲಿದ್ದಾಗ ಸ್ಮರ ಕೊರವಂಜಿ, ಬ್ರಹ್ಮಶತಕೋಶ, ನಾಗಕುಮಾರ ಷಟ್ಪದಿ, ಜಿನಭಾರತ (ಚಾರುಭಾರತ) ಎಂಬ ಗ್ರಂಥಗಳನ್ನೂ ದೀಕ್ಷಾನಂತರ ರುದ್ರಯಕ್ಷಗಾನ, ಮುಲ್ಲಾಶಾಸ್ತ್ರ, ಪರಶುರಾಮ ಭಾರತ, ಭವಾಮೃತ, ಚಂದನೆಯ ಕಥೆ ಎಂಬ ಐದು ಗ್ರಂಥಗಳನ್ನೂ ರಚಿಸಿದಂತೆ ತಿಳಿದುಬರುತ್ತದೆ. ಪರಶುರಾಮ ಭಾರತವನ್ನು 1810ರಲ್ಲೂ ಜಿನಮುನಿಯನ್ನು 1814ರಲ್ಲೂ ಬರೆದಂತೆ ಕವಿ ಹೇಳಿಕೊಂಡಿದ್ದಾನೆ.

ಪುರಾಣಸ್ತೋತ್ರ ಹಾಗೂ ಜಿನಮುನಿ ವಾರ್ಧಕ ಷಟ್ಪದಿಯಲ್ಲಿವೆ. ಜಿನಮುನಿಯಲ್ಲಿ 50 ಸಂಧಿಗಳು, 2.551 ಪದ್ಯಗಳೂ ಇವೆ. ಈ ಗ್ರಂಥವನ್ನು ವೇಣುಪುರಿಯ ಶ್ರಾವಕರ ಪ್ರಾರ್ಥನಾನುಸಾರ ರಚಿಸಿದೆನೆಂದು ಕವಿ ಹೇಳಿಕೊಂಡಿದ್ದಾನೆ. ಪರಶುರಾಮ ಭಾರತ (24 ಅಧ್ಯಾಯ, 1,369 ಪದ್ಯ), ಜೈನತತ್ವವನ್ನು ಬೋಧಿಸುವ ಜಿನಭಕ್ತಿಸಾರ (108 ಪದ್ಯ), ಮುಲ್ಲಾಶಾಸ್ತ್ರ, ಜಿನರಾಮಾಯಣ, ಕದಂಬಪುರಾಣ (199 ಪದ್ಯ)-ಇವು ಭಾಮಿನಿ ಷಟ್ಪದಿಯಲ್ಲಿವೆ. ಕದಂಬಪುರಾಣದಲ್ಲಿ ಕವಿ ಬೆಟ್ಟವರ್ಧನ ಚರಿತ್ರೆ, ಮುಲ್ಲಾಶಾಸ್ತ್ರಗಳನ್ನು ಬರೆದಂತೆ ಹೇಳಿಕೊಂಡಿದ್ದಾನೆ. ಹಿಮಶೀತಳನ ಕಥೆ, ಬೆಟ್ಟವರ್ಧನ ಚರಿತ್ರೆ ಸಾಂಗತ್ಯ ಗ್ರಂಥಗಳು.
(ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ